ಪಕ್ಕೆ ಮೀನು  -
	ಇದೊಂದು ಸಿಹಿನೀರಿನ ಮೀನು.  ಬಾರ್ಬಸ್ ಮೇಲೆನೋಸ್ಟಿಗ್ಮ ಇದರ ಶಾಸ್ತ್ರೀಯ ಹೆಸರು.  ಇದು ಕಾವೇರಿ ನದಿ ಹಾಗೂ ಕೇರಳದ ವೈನಾಡು ಬೆಟ್ಟ ಪ್ರದೇಶಗಳ ನದಿಗಳಲ್ಲಿ ಕಾಣಸಿಗುತ್ತದೆ.

	ದೇಹದ ಬಣ್ಣ ಮೇಲ್ಭಾಗದಲ್ಲಿ ಬೆಳ್ಳಿಯಂತೆ ಹೊಳೆಯುತ್ತಿದ್ದು ಪಾಶ್ರ್ವಗಳಲ್ಲಿ ಮತ್ತು ಕೆಳಭಾಗದಲ್ಲಿ ಬಿಳಿಯಾಗಿವೆ.  ಪಾಶ್ರ್ವದುದ್ದಕ್ಕೂ ಒಂದು ಸಣ್ಣ ಪಟ್ಟಿಯಿದೆ.  ಬಾಲದ ಪಕ್ಕದಲ್ಲಿ ಇಪ್ಪತ್ತೊಂದು ಅಥವಾ ಇಪ್ಪತ್ತೆರಡನೆಯ ಶಲ್ಕಗಳಿಂದ ಪ್ರಾರಂಭಗೊಳ್ಳುವ ಒಂದು ಕಪ್ಪುಬಣ್ಣದ ಉದ್ದ ಮಚ್ಚೆ ಇದೆ.  ಬೆನ್ನಿನ ಹಾಗೂ ಬಾಲದ ಈಜು ರೆಕ್ಕೆಗಳು ಬೂದಿ ಬಣ್ಣದವು.  ಕೆಲವು ವೇಳೆ ಪಕ್ಕದಲ್ಲಿ ಕಪ್ಪು ಬಣ್ಣದ ಒಂದು ಪಟ್ಟಿಯಿರುವುದುಂಟು. ಇಸು ಸುಮಾರು 8 ಸೆಂ.ಮೀ ಬೆಲೆಯುತ್ತದೆ.

	ಈ ಮೀನಿನ ಬಾಯಿ ಕಿರಿದು.  ಮೇಲ್ದವಡೆ ಕೆಳದವಡೆಯ ಮೇಲೆ ಚಾಚಿದೆ.  ಕೆಳಗಿನ ತುಟಿಯ ಮಡಿಕೆ ಭೇದಿಸಲ್ಪಟ್ಟಿದೆ.  ಜೊತೆಗೆ ಚಿಕ್ಕದಾದ ಮೇಲ್ದವಡೆಯ ದಾಡಿಗಳಂತಿರುವ ಸ್ಪರ್ಶಾಂಗಗಳೂ ಈ ಮೀನಿನಲ್ಲಿ ಕಂಡು ಬರುತ್ತವೆ. 

	ದೇಹದ ಮುಕ್ಕಾಲು ಭಾಗದಷ್ಟು ಎತ್ತರವಿರುವ ಬೆನ್ನಿನ ಈಜುರೆಕ್ಕೆ ನಿಮ್ಮ ಮಧ್ಯದ ಮೇಲಿನ ಅಂಚನ್ನು ಹೊಂದಿದೆ.  ಇದು ಹೊಟ್ಟೆಯ ಈಜುರೆಕ್ಕೆಯ ಒಳ ಸೇರಿಸುವಿಕೆಯ ಮುಂದಿನಿಂದ ಪ್ರಾರಂಭಗೊಂಡು ಮೂತಿಯ ಕೊನೆ ಹಾಗೂ ಬಾಲದ ಈಜುರೆಕ್ಕೆಯ ತಳದ ನಡುವೆ ಮಧ್ಯಭಾಗದಲ್ಲಿದೆ.  ಬಾಲದ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ.  ಈ ಮೀನಿನಲ್ಲಿ ಪಾಶ್ರ್ವಸ್ಥ ರೇಖೆ ಸಂಪೂರ್ಣವಾಗಿದೆ.
(ಬಿ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ